'ರಾಜಾಸಿಂಹ'ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್! ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಆಶೀರ್ವಾದೊಂದಿಗೆ ಬರುತ್ತಿರುವ 'ರಾಜಾಸಿಂಹ' ಚಿತ್ರದ ಆಡಿಯೋವನ್ನ ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಲಿದ್ದಾರೆ. ಇದೇ ಭಾನುವಾರ ಮಧ್ಯಾಹ್ನ 1.35ಕ್ಕೆ ಬೆಂಗಳೂರಿನಲ್ಲಿರುವ ಚಾಮೆಂಡೇಶ್ವರಿ ಸ್ಟುಡಿಯೋದಲ್ಲಿ 'ರಾಜಾಸಿಂಹ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದ್ದು, ಮಿಸ್ಟರ್ ರಾಮಾಚಾರಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.ಅಂದ್ಹಾಗೆ, 'ರಾಜಾ ಸಿಂಹ' ಚಿತ್ರವು "ಸಿಂಹಾದ್ರಿಯ ಸಿಂಹ' ಚಿತ್ರದ ಮುಂದುವರೆದ ಭಾಗವಾಗಿದ್ದು, ನಟ ಅನಿರುದ್ಧ್ ನಾಯಕನಾಗಿ ಅಭಿನಯಿಸಿದ್ದಾರೆ. ವಿಶೇಷ ಅಂದ್ರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಪಾತ್ರವೂ ಇರುತ್ತಂತೆ. "ಸಿಂಹಾದ್ರಿಯ ಸಿಂಹ' ಚಿತ್ರದಲ್ಲಿನ ವಿಷ್ಣುವರ್ಧನ್ ಅವರ ಸ್ಟಾಕ್ ಶಾಟ್ ಗಳನ್ನು ಬಳಸಿಕೊಳ್ಳುವುದರ ಜೊತೆಗೆ, ಗ್ರಾಫಿಕ್ಸ್ ಮೂಲಕ ಅವರನ್ನು ಮತ್ತೂಮ್ಮೆ ಸೃಷ್ಠಿಸಲಾಗುತ್ತಿರುವುದು ಈ ಚಿತ್ರದ ವಿಶೇಷ.ರವಿ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಿ.ಡಿ ಬಸಪ್ಪ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅನಿರುದ್ಧ್ ಜೊತೆ ನಿಖಿತಾ ತುಕ್ರಾಲ್, ಸಂಜನಾ ಗರ್ಲಾನಿ, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಬುಲ್ಲೆಟ್ ಪ್ರಕಾಶ್, ಚಿತ್ರಾ ಶೆಣೈ, ವಿಜಯ್ ಚೆಂಡುರ್, ಸಿ.ಡಿ.ಬಸಪ್ಪ, ಪವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.